ಓವಿಡ್: ಪ್ರ.ಶ.ಪು. 43-ಪ್ರ.ಶ. 18. ರೋಮ್ ದೇಶದ ಅಗಸ್ಟನ್ ಸಾಹಿತ್ಯ ಯುಗದ ಕೊನೆಯ ಕವಿ. ಪುರ್ಣನಾಮ ಪ್ಲಬಿಯಸ್ ಓವಿಡಿಯಸ್ ನ್ಯಾಸೊ. ರಮಣೀಯವಾದ ಅಬ್ರುಜಿ ಮಲೆಗಳ ನಡುವೆ ಸಲ್ಮೋ ಎಂಬ ಊರಿನಲ್ಲಿ ಶ್ರೀಮಂತ ಜಮೀನ್ದಾರರ ಮನೆಯಲ್ಲಿ ಹುಟ್ಟಿದ. ಚೇತೋಹಾರಿಯಾದ ನಿಸರ್ಗದ ಚೆಲುವಿನಿಂದ ಪ್ರಭಾವಿತವಾಗಿಯೇ ಈ ಕವಿಚೇತನ ಬೆಳೆಯಿತು. ರೋಮಿನಲ್ಲಿ ಸಾಹಿತ್ಯಾಲಂಕಾರಶಾಸ್ತ್ರಪರಿಣಿತರಾದ ಆರೆಲ್ಲಿಯಸ್ ಫಸ್ಕಸ್ ಮತ್ತು ಪೋರ್ಷಿಯಸ್ ಲ್ಯಾಟ್ರೊ ಎಂಬ ಗುರುಗಳ ಬಳಿ ವ್ಯಾಸಂಗ ಮಾಡಿದ. ಮಗ ಉನ್ನತ ಅಧಿಕಾರಿಯಾಗಬೇಕೆಂಬ ಅಭಿಲಾಷೆಯಿಂದ ಅದಕ್ಕೆ ತಕ್ಕ ತರಬೇತಿಯನ್ನೇ ತಂದೆ ಕೊಡಿಸಿದ. ಆದರೆ ಮಗನ ಒಲವೆಲ್ಲ ಕಾವ್ಯದ ಕಡೆ ತಿರುಗಿತು. ಆಡಳಿತ, ಕಾನೂನು ಶಾಸ್ತ್ರಗಳಲ್ಲಿ ಶಿಕ್ಷಣವಾದ ಅನಂತರ ಸರ್ಕಾರದಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಆಗ ನಾನು ಬರೆದುದೆಲ್ಲ ಅನಾಯಾಸವಾಗಿ ಛಂದೋರೂಪವನ್ನು ತಾಳುತ್ತಿತ್ತು. ತಂದೆಯ ಪ್ರೀತ್ಯರ್ಥವಾಗಿ ಕೆಲವು ಕಾಲ ಸರ್ಕಾರದ ನಾಲ್ಕಾರು ಕಿರಿಯ ಹುದ್ದೆಗಳಲ್ಲಿ ಕೆಲಸಮಾಡಿದನಾದರೂ ಕಡೆಗೂ ಕಾವ್ಯದೇವಿ ತನ್ನೆಡೆಗೆ ನನ್ನನ್ನು ಸಂಪುರ್ಣವಾಗಿ ಸೆಳೆದುಕೊಂಡುಬಿಟ್ಟಳು-ಎಂದು ಕವಿ ತನ್ನ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾನೆ. ನ್ಯಾಯಾಧೀಶನಾಗಿ ಕೆಲಸ ಮಾಡಿದ್ದುಂಟು. ಉನ್ನತ ಸ್ಥಾನವನ್ನು ಪಡೆದ.

ಎರಡು ಬಾರಿ ಮದುವೆ ಆದಾಗಲೂ ದಾಂಪತ್ಯದ ವಿರಸವನ್ನೇ ಅನುಭವಿಸಿದ ಕವಿ ಮೂರನೆಯ ಬಾರಿ ಫೇಬಿಯನ್ ಹಿರಿಯ ಮನೆತನದ ಹುಡುಗಿಯನ್ನು ಮದುವೆಯಾದ. ಈಕೆ ಮಾತ್ರ ಪ್ರೀತಿಯ ಮಡದಿಯಾಗಿ ಕೊನೆಯವರೆಗೂ-ಕವಿ ದೇಶಭ್ರಷ್ಟನಾಗಿ ಹೋದಾಗಲೂ-ನಿಷ್ಠೆಯ ಸತಿಯಾಗಿ ಇದ್ದಳು.

ಓವಿಡ್ನ ಆಕರ್ಷಣೀಯ ವ್ಯಕ್ತಿತ್ವದಿಂದಲೂ ಸ್ನೇಹಶೀಲ ಸ್ವಭಾವದಿಂದಲೂ ಹಲವರು, ಅದರಲ್ಲೂ ಹಿರಿಯ ಕಿರಿಯ ಕವಿಗಳೆಲ್ಲರೂ, ಅವನ ಮಿತ್ರರಾಗಿದ್ದರು. ಪ್ರೊಪರ್ಟಿಯಸ್ ಮತ್ತು ಟೈಬುಲಸರಂತೂ ಆತ್ಮೀಯರಾಗಿದ್ದರು. ಟೈಬುಲಸನ ಅಕಾಲಮರಣದಿಂದ ಬಹು ದುಃಖಿತನಾದ ಕವಿ ಒಂದು ಉತ್ಕೃಷ್ಟ ಶೋಕಗೀತೆಯನ್ನು ರಚಿಸಿದ್ದಾನೆ. ಮಹಾಕವಿ ವರ್ಜಿಲನನ್ನು ಒಮ್ಮೆ ನೋಡಿರುವೆ ಮಾತ್ರ ಎಂದು ಹೇಳುವ ಓವಿಡ್ ವರ್ಜಿಲದ ಪರಮ ಸ್ನೇಹಿತನಾಗಿದ್ದ ಈಮಿಲಿಯಸ್ ಮೇಸರನಿಗೆ ಅಚ್ಚುಮೆಚ್ಚಾಗಿದ್ದ. ಆತನೊಂದಿಗೆ ಮಾಡಿದ ಅಥೆನ್ಸ್‌, ಸಿಸಿಲಿಗಳ ಪ್ರವಾಸಗಳ ಮಧುರಸ್ಮೃತಿ ಓವಿಡ್ನ ಕೆಲವು ಕಾವ್ಯಗಳಲ್ಲಿ ಚಿರಂತನವಾಗಿ ಉಳಿದಿದೆ.

ಅಗಸ್ಟಸ್ ಚಕ್ರವರ್ತಿಯ ಕಾಲ ವೈಭವದ ಯುಗ. ಆಗ ರೋಮ್ ನಗರ ಸಕಲ ವಿಲಾಸವಿಭ್ರಮಗಳಿಂದ ಮೆರೆಯುತ್ತಿತ್ತು. ಅದಕ್ಕೆ ತಕ್ಕಂತಿತ್ತು ಅಂದಿನ ಬೆಡಗಿನ ನಾಗರಿಕ ಸಮಾಜ. ಎಲ್ಲ ಬಗೆಯ ಭೋಗವಿಲಾಸಗಳ ರಸಮಯ ಬದುಕೊಂದೇ ಹಿರಿಯ ಆದರ್ಶ. ನೀತಿಧರ್ಮಗಳ ಬದಲು ಥಳಕಿನ ಶಿಷ್ಟಾಚಾರ, ಚತುರ ಮಾತುಗಾರಿಕೆ, ಬುದ್ಧಿಯ ಜಾಣ್ಮೆ ಮುಖ್ಯವಾಗಿದ್ದುವು. ಭೋಗವನ್ನುಳಿದು ಎಲ್ಲದರ ಬಗ್ಗೆಯೂ ತಿರಸ್ಕಾರವಿತ್ತು. ಆಡಂಬರದಿಂದ ಕೂಡಿದ ಆಲಂಕಾರಿಕ ಭಾಷೆಯ ಕಾವ್ಯವೇ ಶ್ರೇಷ್ಠ ಎಂಬ ಅಭಿರುಚಿ ಎದ್ದು ಕಾಣುತ್ತಿತ್ತು. ಇಂಥ ಸಮಾಜದ ಅಚ್ಚುಮೆಚ್ಚಿನ ಕವಿ ಎನಿಸಿದ ಓವಿಡ್.

ಆರ್ಸ್‌ ಅಮೋರ್ಸ್‌ ಎಂಬ ಕೃತಿ ಮೂರು ಸಂಪುಟಗಳಲ್ಲಿ ಪ್ರಕಟವಾಯಿತು. ಇದರ ವಸ್ತು ಪ್ರಣಯ, ಈ ಕಾವ್ಯ ಕೊರಿನ್ನಾ ಎಂಬ ಸುಂದರಿಯೊಬ್ಬಳನ್ನು ಲಕ್ಷ್ಯವಾಗಿಟ್ಟುಕೊಂಡು ಬರೆದುದು.

ಇನ್ನೊಂದು ಕೃತಿ, ಹಿರೋಯಿಡ್ಸ್‌. ಪ್ರಾಚೀನ ಗ್ರೀಕ್ ವೀರಯುಗದ ಸುಂದರಿಯರು ಬರೆದಂತೆ ಕಲ್ಪಿಸಿದ ಪ್ರಣಯಪತ್ರಗಳ ಸಂಕಲನ. ಇದು ಓವಿಡ್ ಬರೆದದ್ದೇ ಇಲ್ಲವೇ ಅವನ ಹೆಸರಿನಲ್ಲಿ ಬೇರೆ ಯಾರೋ ಬರೆದುದೇ ಎಂಬುದು ವಾದಗ್ರಸ್ತವಾಗಿದೆ. 

ದ ಮೆಡಿಕಮೈನ್ ಫೇಸಿ ಎಂಬುದು ಮುಖದ ಸೌಂದರ್ಯ ಪ್ರಸಾಧನಕ್ಕೆ ಸಂಬಂಧಿಸಿದ ಪುಸ್ತಕ.

ಆರ್ಸ್‌ ಅಮೆಟೋರಿಯ ಎಂಬ ಮತ್ತೊಂದು ಕೃತಿ ಮೂರು ಸಂಪುಟಗಳಲ್ಲಿದೆ. ಇದರ ವಸ್ತುವೂ ಪ್ರಣಯವೇ, ಯುವತಿಯರ ಹೃದಯವನ್ನು ಆಕರ್ಷಿಸುವ ಕಲೆಯನ್ನು ಕವಿ ಇಲ್ಲಿ ಸ್ವಾರಸ್ಯವಾಗಿ ಬೋಧಿಸುತ್ತಾನೆ. ಇದು ಓವಿಡ್ನ ವಿಶಿಷ್ಟ ವ್ಯಕ್ತಿತ್ವವನ್ನು ಸಮರ್ಥವಾಗಿ ಪ್ರತಿಬಿಂಬಿಸುವ ಶ್ರೇಷ್ಠ ಕೃತಿ ಎಂದು ಮೆಕಾಲೆಯ ಅಭಿಪ್ರಾಯ. (ಬಹುಶಃ ಅಶ್ಲೀಲ ಸಾಹಿತ್ಯದಲ್ಲಿ ಇದನ್ನು ಮೀರಿಸುವ ಕೃತಿ ಮತ್ತೊಂದಿರಲಾರದು).
ರೆಮೆಡಿಯಾ ಅಮೋರ್ಸ್‌ ಪ್ರೇಮದ ತಾಪನಿವಾರಣೆ ಮಾಡಿಕೊಳ್ಳುವ ವಿಧಾನವನ್ನು ಕುರಿತದ್ದು. ಆರ್ಸ್‌ ಅಮೋರ್ಸ್‌ಗೆ ಚಿಕಿತ್ಸೆರೂಪವಾದ ಕಾವ್ಯ. ಅದರ ಅತಿರೇಕವನ್ನು ಸ್ವಲ್ಪ ಸರಿಪಡಿಸುವ ಯತ್ನ ಇದರಲ್ಲಿ ನಡೆದಿದೆ, ಅಶ್ಲೀಲದಲ್ಲಿ ಅದಕ್ಕೂ ಒಂದು ಕೈ ಮಿಗಿಲಾದರೂ ಮೊದಲ ಕಾವ್ಯದ ಪರಿಣತ ಶೈಲಿ ಇಲ್ಲಿ ಕಾಣುವುದಿಲ್ಲ.

ಮಿಡಿಯಾ ಎಂಬ ದುರಂತನಾಟಕವನ್ನು ಅನೇಕ ಪ್ರಾಚೀನ ವಿಮರ್ಶಕರು ಮೆಚ್ಚಿ ಉಲ್ಲೇಖಿಸಿರುವರಾದರೂ ಕೃತಿ ಇದುವರೆಗೆ ದೊರೆತಿಲ್ಲ.
ಮೆಟಾಮಾರ್ಫೋಸಿಸ್ ಎಂಬುದು ಗ್ರೀಕ್ ಪುರಾಣದಿಂದ ಸಂಗ್ರಹಿಸಿದ ಜಗತ್ತಿನ ಸೃಷ್ಟಿ-ವಿಕಾಸಗಳ ಕಥೆಗಳನ್ನು 15 ಸಂಪುಟಗಳಲ್ಲಿ ನಿರೂಪಿಸುವ ದೊಡ್ಡ ಕಾವ್ಯ ಕ್ರಿಸ್ತಶಕದ ಪ್ರಾರಂಭದಲ್ಲಿ ರಚಿಸಲಾಯಿತು. ಅನುಕರಣೀಯವಾದ ಕಥನಶೈಲಿ, ಲಲಿತವಾದ ಬಂಧ, ಬೇರೆ ಬೇರೆ ಕಥೆಗಳನ್ನು ಸಹಜವಾಗಿ ಸುಸಂಬದ್ಧವಾಗಿ ಹೆಣೆದಿರುವ ಕೌಶಲ, ಈ ಕೃತಿಯ ಗುಣಾಂಶಗಳು. ಇಲ್ಲಿನ ಮೋಹಕ ಕಥನಶೈಲಿಗೆ ಮನ ಸೋಲದವರಿಲ್ಲ. ಷೇಕ್ಸ್‌ಪಿಯರ್, ಮಾರ್ಲೊ, ಮಿಲ್ಟನ್, ಡ್ರೈಡನ್ ಮುಂತಾದ ಶ್ರೇಷ್ಠ ಇಂಗ್ಲಿಷ್ ಕವಿಗಳ ಮೇಲೂ ಬಿದ್ದ ಈ ಕಾವ್ಯದ ಪ್ರಭಾವ ಅದ್ಭುತವಾದುದು. ಮಧ್ಯಯುಗದ ವರ್ಣಶಿಲ್ಪಿಗಳ ಚಿತ್ರಗಳ ವಸ್ತುಗಳಿಗೆ ಈ ಕಾವ್ಯ ಒಂದು ಸಮೃದ್ಧ ನಿಧಿಯಾಯಿತು.

ಫಾಸ್ಟಿ 12 ಸಂಪುಟಗಳಲ್ಲಿ ಪುರೈಸಬೇಕಾಗಿದ್ದ ಬೃಹತ್ ಗ್ರಂಥ. ಆದರೆ ಬರೆದುದು 6 ಸಂಪುಟ ಮಾತ್ರ. ರೋಮಿನ ಪ್ರಮುಖ ಹಬ್ಬಗಳ ವೈಶಿಷ್ಟ್ಯವನ್ನು ವಿವರಿಸುವ ಸ್ವಾರಸ್ಯವಾದ ಕಾವ್ಯವಿದು. ಒಂದೊಂದು ಹಬ್ಬದ ಪುರ್ವಕಥೆ, ಆಚರಿಸುವಾಗ ಅನುಸರಿಸುವ ಕ್ರಮ ವಿಧಿಗಳ ಅರ್ಥ, ಔಚಿತ್ಯ ಮೊದಲಾದುವನ್ನು ವ್ಯಾಖ್ಯಾನಿಸುವ ನೆಪದಲ್ಲಿ ಅನೇಕ ಮನೋರಂಜಕವಾದ ಕಥೆಗಳನ್ನು ಹೇಳಿರುವುದೇ ಇದರಲ್ಲಿನ ವಿಶೇಷ.
ಈ ಕಾವ್ಯವನ್ನು ಬರೆಯುತ್ತಿದ್ದಾಗಲೇ ಓವಿಡ್ನ ಮೇಲೆ ರಾಜಾಜ್ಞೆ ಸಿಡಿಲಿನಂತೆರಗಿತು (ಪ್ರ.ಶ.8). ಕವಿ ದೇಶಭ್ರಷ್ಟನಾಗಿ ಯೂಜಿನ್ ಬೆಂಗಾಡಿನ ಟೋಮಿ ಎಂಬ ಊರಿನಲ್ಲಿ ತನ್ನ ಉಳಿದ ಜೀವಿತವನ್ನು ಕಳೆಯಬೇಕಾಯಿತು. ರೋಮಿನ ಮೂರು ಮುಖ್ಯಗ್ರಂಥಭಂಡಾರಗಳಲ್ಲಿ ಆತನ ಕೃತಿಗಳನ್ನು ಬಹಿಷ್ಕರಿಸಿದರು. ಆತನ ಆಸ್ತಿಪಾಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಮಾಡಿಕೊಳ್ಳಲಿಲ್ಲವಾದರೂ ಮುಂದೆ ಎಂದಾದರೊಮ್ಮೆ ಕ್ಷಮಾದಾನ ದೊರಕಿ ಕವಿಯನ್ನು ಹಿಂದಕ್ಕೆ ಕರೆಸಿಕೊಳ್ಳಬಹುದೆಂಬ ಭರವಸೆಯೇನೂ ಕಾಣಲಿಲ್ಲ. ಈ ಅನಿರೀಕ್ಷಿತ ಬಹಿಷ್ಕಾರಕ್ಕೆ ಆರ್ಸ್ ಅಮೆಟೋವಿಯ’ ಕವನ ಕಾರಣ ಎಂದು ಹೇಳಲಾಯಿತು. ಆದರೆ ನಿಜವಾಗಿ ಏನು ಕಾರಣವೋ ತಿಳಿಯದು. ಚಕ್ರವರ್ತಿಯ ಮೊಮ್ಮಗಳಾದ ಜೂಲಿಯಾ ಮತ್ತು ಸಿಲೇನಸರ ರಹಸ್ಯ ಪ್ರಣಯದ ಪ್ರಕರಣದಲ್ಲಿ ಓವಿಡ್ನ ಕೈವಾಡವಿದ್ದರೂ ಅಸಂಭವವಲ್ಲ. ಬಹುಶಃ ಇದೇ ಚಕ್ರವರ್ತಿಯ ಆಗ್ರಹಕ್ಕೆ ಕಾರಣವಿರಬಹುದು.

ತನ್ನ ನೆಚ್ಚಿನ ರೋಮನ್ ಸಮಾಜದಿಂದ, ಪ್ರಿಯರಾದ ಗೆಳೆಯರಿಂದ, ಪುಸ್ತಕಗಳಿಂದ ದೂರವಾಗಿ ಕಾಲ ನೂಕಬೇಕಾಗಿ ಬಂದುದೇ ಕವಿಗೆ ದೊಡ್ಡ ಕೊರಗಾಯಿತು. ಆಗ ರಚಿಸಿದ ಕಾವ್ಯಗಳಲ್ಲಿ ಟ್ರಿಸ್ಟಿಯಾ ಎಂಬ 5 ಸಂಪುಟಗಳ ಆತ್ಮಕಥೆ ಮತ್ತು ಎಪಿಸ್ಟುಲೇ ಎಕ್ಸ್‌ಪೋಂಟೋ ಎಂಬ 4 ಸಂಪುಟಗಳ ಕೃತಿ ಮುಖ್ಯವಾದುವು. ಉಳಿದ ಅನೇಕ ಕೃತಿಗಳು ಕಳೆದುಹೋಗಿವೆ. ತನ್ನ ಪ್ರಿಯಪತ್ನಿಗೆ, ಆತ್ಮೀಯರಿಗೆ ಮತ್ತು ಆಗಸ್ಟಸ್ ಚಕ್ರವರ್ತಿಗೆ ಬರೆದ ಶೋಕಾರ್ತವಾದ, ಪತ್ರರೂಪದ, ಕವನಗಳಲ್ಲಿ ಕವಿಯ ಕೊರಗೂ ತಾಯ್ನಾಡಿಗೆ ಬೇಗನೆ ಹಿಂತಿರುಗಬೇಕೆಂಬ ಹಂಬಲವೂ ತೀವ್ರವಾಗಿ ಬಹು ಕರುಣಾಜನಕವಾಗಿ ವ್ಯಕ್ತವಾಗಿವೆ.

ಚಕ್ರವರ್ತಿಯ ಮನವನ್ನೊಲಿಸಿಕೊಳ್ಳಲು ಮಾಡಿದ ಅವನ ಪ್ರಯತ್ನಗಳೆಲ್ಲ ವಿಫಲವಾದುವು. ತಾನಿದ್ದ ಟೋಮಿ ಎಂಬ ಊರಿನ ಜನರ ಪ್ರೀತ್ಯಾದರಗಳಿಗೆ ಪಾತ್ರನಾಗಿದ್ದರೂ ತಾಯ್ನಾಡನ್ನೂ ಮನೆಯನ್ನೂ ಮತ್ತೆ ನೋಡಬೇಕೆಂಬ ಹಂಬಲ ಈಡೇರದ ಕೊರಗಿನಲ್ಲೇ ಕವಿ ಕೊನೆಯುಸಿರನ್ನೆಳೆದ.

ಮೃದುಮಧುರವಾದ ಭಾಷೆ, ಸುಂದರವಾದ ಶೈಲಿ, ರಂಜಕವಾದ ವೈವಿಧ್ಯ, ಸ್ವಚ್ಛಂದವಾದ ಕಲ್ಪನಾವಿಲಾಸ, ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ವರ್ಣನಾ ಸಾಮಥರ್ಯ್‌ಮನವನ್ನು ಸೆಳೆಯುವ ಕಥನಕಲೆ-ಇವು ಓವಿಡ್ನ ಸಾಹಿತ್ಯದ ಅಪುರ್ವ ಗುಣಗಳು.
ಇಂದಿನ ಸಣ್ಣ ಕಥೆಗಳ ಕಲಾತ್ಮಕ ತಂತ್ರದ ಮೂಲವನ್ನು ಓವಿಡ್ನ ಕಥೆಗಳಲ್ಲಿ ಗುರುತಿಸಿದರೆ ಆಶ್ಚರ್ಯಪಡಬೇಕಾಗಿಲ್ಲ.	(ಕೆ.ಬಿ.ಪಿ.)
ಸಿಯೊಕ್ಲಾಸಿಕಲ್ ಯುಗದಲ್ಲಿ ಓವಿಡ್ ಯುರೋಪಿನಲ್ಲಿ ಜನಪ್ರಿಯ ಕವಿಯಾಗಿದ್ದ. ಡ್ರೈಡನ್ ಮೊದಲಾದ ಕವಿಗಳು ಆತನ ಕವನಗಳನ್ನು ಅನುವಾದಿಸಿದರು. ಆದರೆ ಅನಂತರ ಅವನ ಪ್ರಭಾವ ಇಳಿಮುಖವಾಯಿತು. ಯೂರಿಸಿಡೀಸನಂತೆ ಓವಿಡನು, ಪೌರಾಣಿಕ ಕಥೆಗಳನ್ನು ವಿಡಂಬನೆಗಾಗಿ ಬಳಸಿಕೊಳ್ಳುತ್ತಾನೆ.

ಓವಿಡ್ನ ಕಾವ್ಯರಚನೆಯಲ್ಲಿ ಮೂರು ಸ್ಪಷ್ಟ ಅವಧಿಗಳಿವೆ. ಯೌವನದ ಕಾಲದಲ್ಲಿ ತನ್ನ ಹಿಂದಿನ ಕವಿಗಳ ‘ಎಲಿಜಿ’ ಸಂಪ್ರದಾಯವನ್ನು ಮುಂದುವರಿಸಿದ. ಈ ಕಾಲದ ಪ್ರಣಯ ಕವನಗಳಲ್ಲಿ ಪ್ರಾಮಾಣಿಕ ಭಾವ ಕಡಿಮೆ, ಕೃತಕತೆ ಹೆಚ್ಚು. ಈ ಕಾಲದಲ್ಲಿಯೇ ಪೌರಾಣಿಕ ಸಾಮಗ್ರಿಯ ಅವನ ಆಸಕ್ತಿ ಚುರುಕಾಯಿತು.

‘ಮೆಟಮಾರ್ಫಸಿಸ್’ ಮಧ್ಯ ಕಾಲಕ್ಕೆ ಸೇರಿದ್ದು, ರೂಪಾಂತರಕ್ಕೆ ಸಂಬಂಧಿಸಿದ ಕಥೆಗಳ ಸಂಗ್ರಹ, ಜೂಲಿಯಟ್ ಸೀಸರ್ ದೇವತೆಯಾಗುವುದೇ ಕಡೆಯ ಕಥೆ. ದೇವತೆಗಳು-ಮನುಷ್ಯರ ಸಂಬಂಧಕ್ಕೆ ಇಲ್ಲಿ ಒತ್ತು; ದೇವತೆಗಳಿಗೆ ವಿಧೇಯನಾದವನಿಗೆ ಕಡೆಯಲ್ಲಿ ಒಂದು ರೂಪಾಂತರದ ಭಾಗ್ಯ ಒದಗುತ್ತದೆ. ಪ್ರೇಮ ಪ್ರಣಯಗಳ ಕವಿ ಈ ಕೃತಿಯಲ್ಲಿ ಗಂಭೀರವಾಗಿ ಕಾಣುತ್ತಾನೆ, ಶೋಧಿಸುತ್ತಾನೆ.
ಕವಿಯ ದೇಶಾಂತರದ ಕಾಲದ ಕವನಗಳಲ್ಲಿ ವಿಷಾದವೇ ಶ್ರುತಿ. ಇಲ್ಲಿ ಆತ್ಮಾವಲೋಕನವೂ ಕಾಣುತ್ತದೆ.

ಓವಿಡ್ ತನ್ನ ಜೀವಿತ ಕಾಲದಲ್ಲಿಯೂ ಅನಂತರವೂ ಜನಪ್ರಿಯವಾಗಿದ್ದ ಕವಿ. ಅವನು ಪ್ರಣಯವನ್ನು ಚಿತ್ರಿಸಿದ ಕಡೆಯ ಮಧ್ಯಯುಗದ ಫ್ರೆಂಚ್ ಕವಿಗಳ ಮೇಲೆ ಪ್ರಭಾವ ಬೀರಿತು.	(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ